Saturday 8 December 2012

ಇಂಗ್ಲೀಷ್ ಬರಲ್ಲ!



ಇಂಗ್ಲೀಷ್ ನೋಡಿ ನೀ ನಗೆಯಾಡದಿರು ಗೆಳತಿ
ಕಂಗಳಿದ್ದರೆ ಸಾಕು ಮಾತಿಗೆಲ್ಲ!
ತಿಂಗಳಿನ ಬೆಳಕಿಗೆ, ಸಂಗೀತದಾ ಸ್ವರಕೆ
ಈ ಕಟ್ಟುಪಾಡುಗಳು ವ್ಯರ್ಥ, ಸಲ್ಲ!

ಪಾಡು ನನ್ನದಲ್ಲ.


"ದೂರ ಹೋದರೆ ನಿನ್ನ ಬಾ ಎಂದು ಬಳಿಗೆ
ಗೋಗರೆದು ಕರೆಯಲಾರೆ.
ಈ ಚಳಿಯ ದಿನಗಳಲಿ ಓ ಎಂದು ಊಳಿಡುವ
ನಾಯಿ ನಾನಾಗಲಾರೆ.

ಸಖಿಗೆ ಎರಡು ಸಾಲು,


"ಹೊರಗೆ ಚಳಿಯಿದೆ, ಬಳಿ ಬಂದು ನಿಲ್ಲು, ಮಾತಾಡು
ತಬ್ಬಿ ಕುಳಿತುಕೊಂಡಂತೆ ಹಿಗ್ಗು!
ಬರಿಯ ಮಾತು ಇದಲ್ಲ, ನಿನ್ನೆ ಹೀಗೇ ಇತ್ತು
ಇನ್ನಾದರೂ ತೊರೆ ಇಂಥ ಸಿಗ್ಗು!"

"ನಿನ್ನ ನೆನೆಯದೆ ಬೆಳಗು ಕಳೆಯದು ಸಖಿಯೆ
ಭಾರವಾಗದ ಅಣಕು ಇಬ್ಬನಿಯದು
ಹೀಗೆ ನನ್ನಯ ಚಿತ್ರ ಕನ್ನಡಿಯ ದಿಟ್ಟಿಸಿದೆ
ಇನ್ನೊಂದು ಬಿಂದು ಈ ಕಂಬನಿಯದು"

ನಿನ್ನೆ ಸಿಕ್ಕವಳು ಇಂದೂ ಸಿಕ್ಕರೆ


"ನಿನ್ನೆಸಿಕ್ಕವಳು ಇಂದೂ ಸಿಕ್ಕರೆ
ಒಂದು ನಗು, ಹೆಚ್ಚುವುದೇನೋ ಮತ್ತೆ ನಕ್ಕರೆ.
ನೋಡದಂತೆಯೆ ಸಾಗಿ,
ಏನೋ ಕಳೆದುಕೊಂಡಂತೆ ನಟಿಸುವುದಿದೆ,
ಅದೇ ನಾಳೆಗೆ ಅಕ್ಕರೆ."

ಗುರುತಿಲ್ಲದ ಹುಡುಗಿಯರು


"ಗುರುತಿಲ್ಲದ ಹುಡುಗಿಯರು ಹೀಗೇ
ನೋಡುತ್ತಾರೆ ;ನಗುತ್ತಾರೆ.
ನಾವು ನಗಲು ಕಾಯುತ್ತಾರೆ
ಎನ್ನುವಷ್ಟರಲ್ಲಿ, ಮಾಯವಾಗುತ್ತಾರೆ."

ಚಪ್ಪಲಿ


"ನಿನ್ನ ಹಿಂದೆ ನಡೆದು
ನನ್ನ ಪಾದ ಸವೆಯಲಾರದು.
ಏಕೆಂದು ಗೊತ್ತಿದೆ ನಿನಗೆ,
ಚಪ್ಪಲಿ ಪ್ಯಾರಾಗಾನಿನದು."

ನಟನೆ


"ನಟನೆ ಎಷ್ಟು ಚಂದ ನೋಡಿ!
ಒಳಗಿನ ಕಪ್ಪು
ಹೊರಗೆ ಬಿಳಿಯಾಗಿ,
ಮೆಲ್ಲ ಮೆಲ್ಲನೇ ಚಾಚಿಕೊಂಡು
ಭಾವನೆಗಳನ್ನು ಬಾಚಿಕೊಂಡು
ಕಪ್ಪಾಗುವುದು.
ಸಂಬಂಧ ಮುಪ್ಪಾಗುವುದು."

ಭೂಮಿ


"ಮುಂಜಾನೆ ನಾನೆದ್ದು ನಡೆಯುವಾಗ
ಮಂಜಿನ ಬಿಂದುಗಳಲ್ಲಿ ಕಂಡೆ ನಿನ್ನನ್ನು.
ಅಣಕಿಸುತ್ತಿದ್ದವು ನನ್ನ ಬೆವರ ಹನಿಗಳನ್ನು,
ಹೌದು ಎನ್ನಿಸುವಂತೆ; ಅವಳು ಭೂಮಿ."

ಬದಲಾವಣೆ


"ಕಟುಕ ಬರೀ ಕತ್ತರಿಸುತ್ತಾನೆ
ಕೊಲ್ಲುತ್ತಾನೆ ಎಂದುಕೊಂಡೆ,
ಕಟುಕನ ಮಗ ನೆತ್ತರ ಕಲೆಯನ್ನು
ತೊಳೆಯುವುದನ್ನ ನೋಡಿದೆ."

ಆಶಾಭಾವ.


"ಗೋರಿಗಳ ಮಧ್ಯೆ ಹಳೆಯ ಎಲುಬುಗಳನ್ನು
ನೋಡಿ ನೋವು ಹಂಚುತ್ತಿದ್ದೆ.
ಒಂದು ಮಿಂಚು ಬಂದಂತಾಯಿತು,
ಮೇಲೆ ಕತ್ತೆತ್ತಿ ನೋಡಿದರೆ ಅಸಂಖ್ಯ ನಕ್ಷತ್ರಗಳು."

ಈಜುವುದಕ್ಕೆ


"ಇದು ನದಿ, ಇದು ಹರಿವು ಎಂದೆಲ್ಲ ಹೇಳದಿರು
ನೀರು ಕಾಣದ ಹುಡುಗ ನಾನು ಅಲ್ಲ.
ನೀನೇನೋ ಪರಿಣತನು, ಸೆಳೆತವನು ಅರಿತವನು
ಈಜು ಕಲಿತವ ಜಗಕೆ ದೇವರಲ್ಲ!

ನಾನಿನ್ನು ಕಲಿಯುವವ ನೀರಿಗೆ ಬಿದ್ದೊಡನೆ
ಕಾಲು ಬಡಿವುದ ಕಲಿತು, ಉಳಿಯಬೇಕು
ಮರೆತುಹೋದರೆ ಸಾವು? ಎಂದೆಂಬ ಹೆದರಿಕೆ
ಸುಳಿಯ ಸೆಳೆತವ ತಡೆಯೆ ಹರಸಬೇಕು."

"ನೀನಿಲ್ಲದಿದ್ದರೆ ಗೆಳತಿ


"ಅವಳೆಂದಳು
ನಿನ್ನ ಬರಹಗಳಲ್ಲಿ ಎಷ್ಟೊಂದು
ಅರ್ಥ ಹುದುಗಿರುತ್ತದೆ.
ಅವಳಿಗೂ ಗೊತ್ತಿದೆ,
ಹುಡುಗಿ ಇರುತ್ತದೆ."

೨.

"ನೀನಿಲ್ಲದಿದ್ದರೆ ಗೆಳತಿ
ಹೊತ್ತು ಸಾಗದು
ಕಾಡುತಿಹ ನೆನಪುಗಳೂ
ಸತ್ತು ಹೋಗದು."

ಎರಡು ಸಾಲುಗಳು-ಅವಳಿಗೆ


"ಇಂದೇನೋ ಬಹುಸೊಗಸು ಚಂದ್ರ ಉರಿಯುವುದಿಲ್ಲ
ಮೋಡಗಳ ಮರೆಯಲ್ಲಿ ನನ್ನ ಅಣಕಿಸಲಿಲ್ಲ,
ಸಣ್ಣ ನಗು ಚೆಲ್ಲುತಲಿ, ಮತ್ತೇನೋ ಹೇಳುತಲಿ
ಇದ್ದೇನೆ ಜೊತೆಗೆ, ಎಂದು ತಿಳಿಸಿದಂತೆ."

"ಬಿಟ್ಟು ಹೋಗುವುದಕ್ಕೆ ಕಾರಣವ ಕೇಳದಿರು
ಒಟ್ಟಾಗಿ ಹೋಗುವುದು ಸಾಧ್ಯವೇನು?
ಗುಟ್ಟಾಗಿ ನೀ ನನ್ನ ಮನಸಿನೊಳಗಡೆ ಇದ್ದು
ನೆಟ್ಟಂತ ಮರಕೀಗ ಹೆಸರು ಏನು?"

ಚಳಿಗಾಲದಲ್ಲಿ ಅವಳು.


"ತಲೆಯಕೂಲನ್ನ ಕೆಡಿಸಿ, ಮುಚ್ಚಿಸಿ ಕಣ್ಣ
ಸೆಳೆದು ಬಟ್ಟೆಯನೆಲ್ಲ, ಸೆಳೆತದಲೆ ಇದ್ದು!
ಮೈಗೆ ಕಚಗುಳಿಯಿಟ್ಟು, ರೋಮಾಂಚಮಿಂಚಿನಲಿ
ನಡುಗುವುದ ಸಹಕರಿಸಿ, ಮತ್ತೆ ರಮಿಸಿ.
ಅಧರಗಳ ಚಪ್ಪರಿಸೆ, ಏನೋ ಗಲಿಬಿಲಿ ನೀಡಿ
ಮತ್ತೆ ಹೊಡೆದಿತು ಗಾಳಿ, ಚಳಿ ತುಂಬಿ ಹೋಳಿ
ಪ್ರಾಯವೂ ಚಳಿಯೂ ಸೇರಿತ್ತು ಹೀಗೆ,
ಅವಳಿಗೆ ಇನಿಯನು ಇರದಿದ್ದ ಬೇಗೆ."

ಕೊನೆಗೂ ಬಿಡೆನು.


"ನೀ ಸಿಗಲೇ ಬೇಕೆಂದು ರಚ್ಚೆ ಹಿಡಿಯುವುದಿಲ್ಲ
ಪದೇ ಪದೇ ನಿನ್ನನು ಚುಚ್ಚಿ ಕಾಡುವುದಿಲ್ಲ,
ಕೊನೆಗೆ ಮರೆಯಾದೆ ಎಂದು ನೀನನಬೇಡ,
ಆತ್ಮವೊಂದಿದ್ದರೆ ಅದು ನಿನಗೆ ಹರಸುವುದು."

ಉಪದೇಶ


"ಪುಟ್ಟ ಹಕ್ಕಿಯೆ ನೀನು ಇಟ್ಟ ಹೆಜ್ಜೆಯ ಮರೆತು
ಹಾರಿಹೋಗುವುದೇನು ಸುಲಭವಲ್ಲ.
ಕೆಟ್ಟ ಗಾಳಿಯೆ ಬರಲಿ, ಸುಡುವ ಬಿಸಿಲೇ ಇರಲಿ
ಗಟ್ಟಿಯಿರದಿರೆ ಬದುಕು, ಬದುಕು ಅಲ್ಲ!"

ಗಲಿಬಿಲಿ


"ಮಾರ್ಗ ಬದಲಾದರೆ ಗೊಂದಲವಿಲ್ಲ
ಸಾಗುವುದು ಹೀಗೇ ದಾರಿ!
ಕವಲೊಡೆದಾಗ ಗಲಿಬಿಲಿಗುಟ್ಟುವೆ
ತೋರುವರಾರ್ ಈ ಬಾರಿ?"

ಎದಿರುಗೊಳ್ಳು


"ಬಂದಾಗ ನೀ ಎನ್ನ ಮಾತನಾಡಿಸಲಿಲ್ಲ
ನಕ್ಕು ನೀನೆನ್ನಬಳಿ ಸುಳಿಯಲಿಲ್ಲ
ಎಂದೆನ್ನ ಜರೆದವಳು, ಈತರದ ಬಿಂಕದಲಿ
ಸುಮ್ಮನಿದ್ದರೆ ಹೀಗೆ, ಸೊಗಸು ಇಲ್ಲ!"

ಮರದಂತಿರು.


"ನೋಡು ಪುಟ್ಟೀ,
ಆ ನೀಲಗಿರಿಯ ಮರ
ತೊಗಟೆ ಕಳಚಿ ಶುಭ್ರ!
ನೀನೇಕೆ ಹಳೆಯ ಕಹಿಯನ್ನು
ಮರೆಯುವುದಿಲ್ಲ?

ಹಾಗೆಯೇ
ತೊಗಟೆ ಕಳಚಿದ್ದು
ನೀನು ಮೇಲೇಳುವುದಕ್ಕೆ
ಗೊಬ್ಬರ."

ಅವಳಿಗೆ!


"ಎಲ್ಲ ಬರೆಯುವಾಸೆ ನನಗೆ
ಬರೆಯಲಾರೆ ಹೀಗೆ!
ನಿನಗೆ ಹೇಗೂ ಗೊತ್ತೇ ಇದೆ
ಕಾಡುತಿರುವ ಬೇಗೆ!

ಇನ್ನೂ ಮತ್ತೂ ಕೇಳಿದರೆ?
ಹೇಳಲಾರೆ ಹೋಗೆ!!"

ಬೆಳದಿಂಗಳು


"ಇಂದು ಅವಳ ಕಂಗಳು
ಚೆಲ್ಲಿತೇ ಬೆಳದಿಂಗಳು?
ನಾನೇನಂದುಕೊಂಡೆನೋ
ಅವಳದನೇ ಕಂಡಳು!"

Monday 3 December 2012

ದೃಷ್ಟಿ


"ಹೊನ್ನು ನನಗೆ ಕಹಿ, ಧನ ಮತಿಯ ಕೆಡಿಸುವುದು
ಎಂದೆಲ್ಲ ಹೇಳಿದರು ಸ್ವಾಮಿಗಳು ಅಂದು.
ಸರಿ ಎಂದೆ, ಚಪ್ಪಾಳೆ ಹೊಡೆದೆ,
ಸೇಬು ಕೊಟ್ಟರು ನನಗೆ.
ಕೇಜಿಗೆ ೧೮೦ ರೂಪಾಯಿ ಎಂದೆ."

ಬಿನ್ನಹ


"ಕೆಣಕಿರಲಿ, ಅಣಕಿರಲಿ ಬಂದೀತು ಒಂದೊಮ್ಮೆ
ಬಾರದೇ ಮಳೆಯಬ್ಬರಕೆ ಕೊಳಚೆ ನೀರು?
ಮತ್ತೆ ಹನಿಗಟ್ಟಿದರೆ, ಶುಭ್ರ ಪಾವನ ಗಂಗೆ
ಮೌನ ತೊರೆದೀಗಲೇ ನಗೆಯ ಬೀರು."

ದೀಪಾವಳಿ


"ನೀನು ಪೆಟ್ಟು ತಿಂದು ನಮಗೆ ಹಣತೆಯಾಗೊ ಮಣ್ಣೆ
ನೀನು ಆರಿ ಬೆಳಕು ಕಾರಿ ಮುಗಿಲ ಸೇರೋ ಎಣ್ಣೆ
ಹಣತೆ ಜೊತೆಗೆ ಎಣ್ಣೆಸೆಳೆದು ಬೆಳಕ ಬತ್ತಿ ಕಣ್ಣೆ
ನಾಚಬೇಕು ಜಗಳವಾಡೋ ನಮ್ಮ ಗಂಡು ಹೆಣ್ಣೆ!"

ನಗು-ಅಳು

"ನಗುವೆಂಬುದು ಎಷ್ಟು ಬಿಗು,
ನಾಭಿಯಿಂದ, ಕರುಳಿಂದ, ಕೊರಳಿಂದ ಹೊರಟು
ಹಲ್ಲುಗಳ ಮಧ್ಯೆ ಸಿಕ್ಕಿ
ನಾಲಿಗೆಯ ಸವೆತಕ್ಕೆ, ಚಪ್ಪರಿಸುವಿಕೆಗೆ ಹೆದರಿ
ಶುಭ್ರವಾಗಿ ಬರಬೇಕು.

ಅಳು ಹಾಗಲ್ಲ, ಮಳೆಗಾಲದ ಜಲಪಾತ
ಹರಿದ ಮೇಲೇ ಅದರ ಭಾರ."

ಪಾಡು..


"ದೂರ ಹೋದರೆ ನಿನ್ನ ಬಾ ಎಂದು ಬಳಿಗೆ
ಗೋಗರೆದು ಕರೆಯಲಾರೆ.
ಈ ಚಳಿಯ ದಿನಗಳಲಿ ಓ ಎಂದು ಊಳಿಡುವ
ನಾಯಿ ನಾನಾಗಲಾರೆ.

ಮನಸ್ಸು


"ಹಾರಿ ಹೋಯಿತು ಹಕ್ಕಿ
ಕೊಂಬೆಯ ಮೇಲೆ ಹಕ್ಕಿಯ ಗುರುತು ಇರಲಿಲ್ಲ.
ಮಂಗ ನೆಗೆಯಿತು,
ಕೊಂಬೆ ಮುರಿದು ತಣಿಯಿತು."

ಒಂದಿಷ್ಟು ನಗೆಯೆನಗೆ ಬಿಟ್ಟು ಹೋಗೇ ಗೆಳತಿ


"ಒಂದಿಷ್ಟು ನಗೆಯೆನಗೆ ಬಿಟ್ಟು ಹೋಗೇ ಗೆಳತಿ
ಸತ್ತಾಗ ಕಣ್ಣು ನೋಡದು, ಕಿವಿಯೂ ಇರದು
ಬರಿಯ ಎಲುಬು ಮತ್ತೆ ಹಲ್ಲುಗಳು ಉಳಿದೀತು!"

ಕನ್ನಡ


ಕನ್ನಡಕ್ಕೆಂದು ನೀ ಕೊಲೆ ಮಾಡಬೇಕಿಲ್ಲ
ಕನ್ನಡವ ಕಂಡೊಡನೆ ನಲಿದಾಡು ಸಾಕು.
ಕನ್ನಡದಿ ಮಾತಾಡು, ಕನ್ನಡದಿ ನೀನಾಡು
ಕನ್ನಡವನುಳಿಸಲು ಬೇರೇನು ಬೇಕು?

ನಿದ್ರೆ


"ಯಾವತ್ತೂ ಹಿತವಾಗಿ
ರೋಮಾಂಚಿತನನ್ನಾಗಿಸಿ
ನಗುತ್ತಾ ಸ್ವಾಗತಿಸುವವಳು ಒಬ್ಬಳೇ
ನಿದ್ರಾದೇವಿ."

ನಿಜ


"ಸೋತು ಬರೆಯುವ ಚಟ ನಿನಗೆ
ಎಂದು ಜರೆಯದಿರು
ಗೆದ್ದಾಗ ಸಂಭ್ರಮಿಸುತ್ತೇನೆ
ಬರೆಯಲಾಗುವುದಿಲ್ಲ."

ಉಪಶಮನ


"ಬರೆದರೆ ನೋವು ಮಾಯವಾಗುತ್ತದೆ ಎಂದು
ದೊಡ್ಡ ಅಕ್ಷರದಲ್ಲಿ ನೋವು ಎಂದು ಬರೆದ.
ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಬಿದ್ದು
ಅಕ್ಷರ ಅಳಿಸಿದಂತೆ ಭಾಸ."

ದಾರಿ.


"ಸಖೀ,
ನೀ ಬಂದ ದಾರಿ ಬೇರೆ
ನನ್ನ ದಾರಿಯೂ ಬೇರೆ
ಎಂದಾದರೂ ದಾರಿಗಳು ಸೇರಿದರೆ
ಜೊತೆಯಾಗಿ ಸಾಗೋಣ
ಇಲ್ಲವೇ
ಹೀಗೆಯೇ ಹೋಗೋಣ."

ಹುಚ್ಚುತನ


"ಹತ್ತು ಕಡೆ ಕಣ್ಣು ಹಾಯಿಸಿದರೂ
ನಗುವವರು ಸಿಕ್ಕಿಲ್ಲ.
ನಾನು ನಗುತ್ತಿದ್ದೆ
ನಗದವರೆಲ್ಲ ಸೇರಿಕೊಂಡು
ನನ್ನನ್ನು ಹುಚ್ಚ ಎಂದರು."

ಚುಕ್ಕಿ-ಗೆರೆ


"ಚುಕ್ಕಿಯಿಟ್ಟದ್ದನ್ನು
ನೇರ ನೋಡಲಿಲ್ಲ
ಬಿದ್ದು, ವಿಮರ್ಶೆ ಮಾಡುತ್ತಾ ನೋಡಿದೆ
ಅದುವೇ
ನಮ್ಮಿಬ್ಬರ ನಡುವೆ ಗೆರೆಯಂತಿದೆ ಈಗ."

ಕೋರಿಕೆ


"ನಿನ್ನ ನೆನೆಯುತ್ತಾ
ನಿದ್ದೆಗೆ ಜಾರುವಾಸೆ ನನ್ನದು
ಎಚ್ಚರವಾಗದಿರಲಿ ನಾಳೆ
ಎಂದು ಹಾರೈಸಿಬಿಡು."

ಚಂದ್ರಮುಖಿ


"ಹುಣ್ಣಿಮೆಯನ್ನು ಅವ ದ್ವೇಷಿಸುತ್ತಾ ಕಳೆದ!
ಕಳೆದ ಹುಡುಗಿಯ ಮುಖ
ನೆನಪಾಗುವುದೆಂದು,
ಚಂದ್ರನನ್ನು ಪೂರ್ಣ ನೋಡಲಾರೆ ಎಂದ."

ಸೂರ್ಯ-ನಲ್ಲ


"ನಿದ್ದೆಗೆ ಜಾರುವಾಗ ಮತ್ತು ಬೆಳಗ್ಗೆ ಏಳುವಾಗಷ್ಟೇ
ಕೆಂಪಾಗಲು ನಾ ಸೂರ್ಯನಲ್ಲ!
ನೋವಿಗೂ ನಲಿವಿಗೂ ಕೆಂಪಾದೀತು ಕಣ್ಣು."

ಅವಳಿಗೆ..


"ಸಂಪಿಗೆ ಗಿಡ ನೆಟ್ಟದ್ದಕ್ಕೆ ಹೂವಾದೀತು
ಮಲ್ಲಿಗೆ ಬಳ್ಳಿ ಊರಿದ್ದಕ್ಕೆ ಹೂವಾದೀತು
ನಿನ್ನೊಲವಿನ ದಾರಿಯಲ್ಲೇ ಕಾದಿದ್ದೇನೆ
ಖಂಡಿತ ಬರದಿದ್ದರೆ ನೋವಾದೀತು!"

ಹೆದರಿಕೆ


"ಕಣ್ಣು ತೋರಿದ್ದಕ್ಕೆಲ್ಲಾ ಸರಿ ಎನ್ನಲಾರೆ!
ಸುಣ್ಣ ಕಂಡಿತು; ಹಚ್ಚಿದೆ
ಹೆಣ್ಣು ಕಂಡಿತು; ಮೆಚ್ಚಿದೆ
ಮಣ್ಣು ಕಂಡಿತು ಈಗ ಬೆಚ್ಚಿದ್ದೇನೆ."

ನಾಚಿಕೆ


"ಮಳೆ ಹನಿ ಬಂತೆಂದು ಖುಷಿಗೊಂಡು
ತಲೆ ಎತ್ತಿದ!
ಮಳೆ ನಿಂತಿತು,
ತಲೆ ತಗ್ಗಿಸಿದ."

ವಿಚಿತ್ರ


"ಹಸಿ ಹಸಿ ಗಾಯ
ಕೆರೆದ ಮೇಲೆ
ನಾಳೆ,
ಪುನಃ ತೊಗಟೆ ಕೆರೆಯಬೇಕು
ಎನ್ನುವ ವಿಚಿತ್ರ ಸಮಾಧಾನ."

ಅಶಾಶ್ವತ


"ನಾನು ಕಬ್ಬನ್ನು ತಿಂದೆ
ಸಿಹಿಯಾಗುತ್ತಿದ್ದೇನೆ.
ಅಗಿದು ಉಗುಳಿದ ಸಿಪ್ಪೆ
ಮೂದಲಿಸುತ್ತಿದೆ
ನಾಳೆ ಒಣಗುತ್ತೇನೆಂದು."

ಪಳೆಯುಳಿಕೆ


"ಶಿಕಾರಿಗೆ ಹೊರಟವನಿಗೆ ಸಿಕ್ಕಿದ್ದು
ಅವನದೇ ಪೂರ್ವಜರ ತಲೆಬುರುಡೆ
ಹಾಗೆಯೇ
ಬರೆದವನಿಗೆ ಸಿಕ್ಕಿದ್ದು
ಬೇರೆಯವರು ಬರೆದುದುದರಲ್ಲಿ
ಹೇಳಲಾಗದೆ ಉಳಿಸಿದ್ದು."

ಹಾನಿ


"ಸಿಗರೇಟು ಸೇದಿದ,
ಕೆಮ್ಮಿದ,
ಉಗುಳಿದ.
ಎಂಜಲು ಹೃದಯದಾಕಾರದಲ್ಲಿ ಬಿದ್ದಿತ್ತು!"

ಬುಗುರಿ-ಹುಡುಗಿ


"ಬುಗುರಿ ಮರ ಕಂಡಾಗ,
ಬೆಳಗ್ಗೆ ನೋಡಿದ ಹುಡುಗಿಯ ನೆನಪು!
ಬುಗುರಿ ಮರದಲ್ಲೂ ಹಾಗೇ
ಬೆಳಗ್ಗಿನ ಹಳದಿ ಹೂ
ಸಂಜೆ ಕೆಂಪಾಗಿತ್ತು!"

ನೋವು-ನಲಿವು


"ನೋವು ನಲಿವು ಬೇರೆಯಲ್ಲ
ನೋವನ್ನು ಬಿಡಿಸುತ್ತಾ ಹೋದಂತೆ ನಲಿವು
ಕಣ್ಣೀರನ್ನು ಒರಸುತ್ತಾ
ಮುಖಕೆ ಕನ್ನಡಿಯ ಹೊಳಪು!"

ಬೆಳವಣಿಗೆ


"ನಿನ್ನನ್ನು ಎತ್ತರಿಸುತ್ತಾ ಸಾಗುವಾಗ
ನನ್ನ ನೆರಳು
ಉದ್ದವಾಗುತ್ತಿದೆಯೆಂದು ನಂಬಿಕೆ.
ನಾನಲ್ಲ ಉದ್ದವಾಗುವುದು,
ವಾಸ್ತವ."

ಆಹಾರ


"ಅಮ್ಮಾ ಕತ್ತಲಾಯಿತು,
ಬೆಳಗ್ಗಿನ ತಂಪಿನ, ಮಧ್ಯಾಹ್ನದುರಿಯ, ಸಂಜೆಯ ಕೆಂಪಿನ
ಆಹಾರ
ಕತ್ತಲ ಹಸಿವೆಯಲ್ಲಿ ಸವೆದು ಹೋಯಿತು!
-ತಗೋ ಮಗನೇ
ತಿಂಗಳ ರೊಟ್ಟಿ."

ವಿಪರ್ಯಾಸ


"ರಾಮನನ್ನು ಕಾಡಿಗಟ್ಟು
ರಾಜ್ಯವಾಳುವಾಸೆಯಿಟ್ಟು
ಎಂದ ಮಂಥರೆ
ಮಾತುಗಳನ್ನು ನಡೆಸಿದ್ದಕ್ಕೆ
ಭರತ ಖತಿಗೊಂಡು, ಅವಳ ಹೊರಗಟ್ಟಿದ.
ಇಲ್ಲಿ ಮಹಿಳೆಯ ಶೋಷಣೆಯೆಂದು
ಪರವೂರಿನ ಮಹಿಳೆಯರು
ಸೇರಿದ್ದಾರೆ.
ಭರತನಿಗೂ ರಾಜ್ಯವಿಲ್ಲ
ರಾಮ ರಾಜ್ಯದಲ್ಲೇ ಇಲ್ಲ
ಬೆನ್ನುಬಾಗಿದ ಮಂಥರೆಯ ಪ್ರತಿಮೆ
ಇಡಬೇಕೆಂದು ಆಗ್ರಹಿಸಿದ್ದಾರೆ."

ಕೃಷ್ಣ


"ಕಪ್ಪು?.. ನೀಲ
ಮುರಳೀಲೋಲ
ಹಗಲು ಗೊಲ್ಲ
ರಾತ್ರಿ ನಲ್ಲ!"

ರಾತ್ರಿ

"ನಿಶೆಯೇರಿ ಹೋದಂತೆ,
ಮಳೆಹನಿ ಮೆಲ್ಲನೆ ಚುಚ್ಚುವಂತೆ,
ಅವಳು!
ಕಪ್ಪಾಗುತ್ತಾ ತಂಪೀಯುವಳು!"