Saturday 8 December 2012

ಇಂಗ್ಲೀಷ್ ಬರಲ್ಲ!



ಇಂಗ್ಲೀಷ್ ನೋಡಿ ನೀ ನಗೆಯಾಡದಿರು ಗೆಳತಿ
ಕಂಗಳಿದ್ದರೆ ಸಾಕು ಮಾತಿಗೆಲ್ಲ!
ತಿಂಗಳಿನ ಬೆಳಕಿಗೆ, ಸಂಗೀತದಾ ಸ್ವರಕೆ
ಈ ಕಟ್ಟುಪಾಡುಗಳು ವ್ಯರ್ಥ, ಸಲ್ಲ!

ಪಾಡು ನನ್ನದಲ್ಲ.


"ದೂರ ಹೋದರೆ ನಿನ್ನ ಬಾ ಎಂದು ಬಳಿಗೆ
ಗೋಗರೆದು ಕರೆಯಲಾರೆ.
ಈ ಚಳಿಯ ದಿನಗಳಲಿ ಓ ಎಂದು ಊಳಿಡುವ
ನಾಯಿ ನಾನಾಗಲಾರೆ.

ಸಖಿಗೆ ಎರಡು ಸಾಲು,


"ಹೊರಗೆ ಚಳಿಯಿದೆ, ಬಳಿ ಬಂದು ನಿಲ್ಲು, ಮಾತಾಡು
ತಬ್ಬಿ ಕುಳಿತುಕೊಂಡಂತೆ ಹಿಗ್ಗು!
ಬರಿಯ ಮಾತು ಇದಲ್ಲ, ನಿನ್ನೆ ಹೀಗೇ ಇತ್ತು
ಇನ್ನಾದರೂ ತೊರೆ ಇಂಥ ಸಿಗ್ಗು!"

"ನಿನ್ನ ನೆನೆಯದೆ ಬೆಳಗು ಕಳೆಯದು ಸಖಿಯೆ
ಭಾರವಾಗದ ಅಣಕು ಇಬ್ಬನಿಯದು
ಹೀಗೆ ನನ್ನಯ ಚಿತ್ರ ಕನ್ನಡಿಯ ದಿಟ್ಟಿಸಿದೆ
ಇನ್ನೊಂದು ಬಿಂದು ಈ ಕಂಬನಿಯದು"

ನಿನ್ನೆ ಸಿಕ್ಕವಳು ಇಂದೂ ಸಿಕ್ಕರೆ


"ನಿನ್ನೆಸಿಕ್ಕವಳು ಇಂದೂ ಸಿಕ್ಕರೆ
ಒಂದು ನಗು, ಹೆಚ್ಚುವುದೇನೋ ಮತ್ತೆ ನಕ್ಕರೆ.
ನೋಡದಂತೆಯೆ ಸಾಗಿ,
ಏನೋ ಕಳೆದುಕೊಂಡಂತೆ ನಟಿಸುವುದಿದೆ,
ಅದೇ ನಾಳೆಗೆ ಅಕ್ಕರೆ."

ಗುರುತಿಲ್ಲದ ಹುಡುಗಿಯರು


"ಗುರುತಿಲ್ಲದ ಹುಡುಗಿಯರು ಹೀಗೇ
ನೋಡುತ್ತಾರೆ ;ನಗುತ್ತಾರೆ.
ನಾವು ನಗಲು ಕಾಯುತ್ತಾರೆ
ಎನ್ನುವಷ್ಟರಲ್ಲಿ, ಮಾಯವಾಗುತ್ತಾರೆ."

ಚಪ್ಪಲಿ


"ನಿನ್ನ ಹಿಂದೆ ನಡೆದು
ನನ್ನ ಪಾದ ಸವೆಯಲಾರದು.
ಏಕೆಂದು ಗೊತ್ತಿದೆ ನಿನಗೆ,
ಚಪ್ಪಲಿ ಪ್ಯಾರಾಗಾನಿನದು."

ನಟನೆ


"ನಟನೆ ಎಷ್ಟು ಚಂದ ನೋಡಿ!
ಒಳಗಿನ ಕಪ್ಪು
ಹೊರಗೆ ಬಿಳಿಯಾಗಿ,
ಮೆಲ್ಲ ಮೆಲ್ಲನೇ ಚಾಚಿಕೊಂಡು
ಭಾವನೆಗಳನ್ನು ಬಾಚಿಕೊಂಡು
ಕಪ್ಪಾಗುವುದು.
ಸಂಬಂಧ ಮುಪ್ಪಾಗುವುದು."